Rishabh Pant Sixers Record- ಶ್ರೀಲಂಕಾದ ಗಾಲೆಯಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್ನಲ್ಲಿ 100 ಸಿಕ್ಸರ್ ಪೂರೈಸಿದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ. ಲಹಿರು ಕುಮಾರ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಕೇವಲ 89 ಇನ್ನಿಂಗ್ಸ್ಗಳಲ್ಲಿ ಈ ಮೈಲಿಗಲ್ಲು ತಲುಪಿದ ಪಂತ್, ಆಸ್ಟ್ರೇಲಿಯಾದ ಆ್ಯಡಮ್ ಗಿಲ್ಕ್ರಿಸ್ಟ್ (130 ಇನ್ನಿಂಗ್ಸ್) ಅವರ ವಿಶ್ವದಾಖಲೆಯನ್ನು ಧೂಳೀಪಟ ಮಾಡಿದ್ದಾರೆ. ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ 66 ರನ್ ಗಳಿಸಿದ ಅವರು, ಟೆಸ್ಟ್ನಲ್ಲಿ 100 ಸಿಕ್ಸರ್ ಬಾರಿಸಿದ ವಿಶ್ವದ 4ನೇ ಬ್ಯಾಟರ್ ಹಾಗೂ ಅತ್ಯಂತ ಕಡಿಮೆ ಎಸೆತಗಳಲ್ಲಿ ಈ ಸಾಧನೆ ಮಾಡಿದ ಆಟಗಾರರಾಗಿದ್ದಾರೆ.
ಹೈಲೈಟ್ಸ್:
- ಕೇವಲ 89 ಇನ್ನಿಂಗ್ಸ್ಗಳಲ್ಲಿ 100 ಟೆಸ್ಟ್ ಸಿಕ್ಸರ್ ಪೂರೈಸಿ, ಆ್ಯಡಮ್ ಗಿಲ್ಕ್ರಿಸ್ಟ್ ಅವರ ವಿಶ್ವದಾಖಲೆ ಮುರಿದ ರಿಷಭ್ ಪಂತ್.
- ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 100 ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ಹಾಗೂ ವಿಶ್ವದ 4ನೇ ಬ್ಯಾಟರ್ ಎಂಬ ಹೆಗ್ಗಳಿಕೆ.
- ಪ್ರತಿ 49.2 ಎಸೆತಗಳಿಗೆ ಒಂದು ಸಿಕ್ಸರ್ ಬಾರಿಸುವ ಮೂಲಕ ಅತ್ಯಂತ ವೇಗವಾಗಿ ಸಿಕ್ಸ್ ಗಳಿಸಿದ ದಾಖಲೆಯೂ ಪಂತ್ ಪಾಲು.

ಶ್ರೀಲಂಕಾ ವೇಗಿ ಲಹಿರು ಕುಮಾರ ಎಸೆದ ಚೆಂಡನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಲಾಂಲ್ ಲೆಗ್ ಮೇಲೆ ಬೃಹತ್ ಸಿಕ್ಸರ್ಗೆ ಅಟ್ಟುವ ಮೂಲಕ ಪಂತ್ ಈ ಐತಿಹಾಸಿಕ ಸಾಧನೆ ಮಾಡಿದರು. ಈ ಆಕರ್ಷಕ ಸಿಕ್ಸರ್ನೊಂದಿಗೆ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ 20ನೇ ಅರ್ಧಶತಕವನ್ನೂ ಪೂರೈಸಿದರು. ಪ್ರಥಮ ಇನ್ನಿಂಗ್ಸ್ ನಲ್ಲಿ ಉಪಯುಕ್ತ 39 ರನ್ ಗಳಿಸಿದ್ದ ಅವರು ಎರಡನೇ ಇನ್ನಿಂಗ್ಸ್ ನಲ್ಲಿ ಔಟಾಗುವ ಮುನ್ನ 69 ಎಸೆತಗಳಲ್ಲಿ 66 ರನ್ ಬಾರಿಸಿದರು. ಅದರಲ್ಲಿ 8 ಆಕರ್ಷಕ ಬೌಂಡರಿ ಮತ್ತು 2 ಭರ್ಜರಿ ಸಿಕ್ಸರ್ ಗಳಿದ್ದವು.
ಆಡಮ್ ಗಿಲ್ಕ್ರಿಸ್ಟ್ ದಾಖಲೆ ಧೂಳಿಪಟ
ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಕಡಿಮೆ ಇನ್ನಿಂಗ್ಸ್ಗಳಲ್ಲಿ 100 ಸಿಕ್ಸರ್ ತಲುಪಿದ ಆಟಗಾರರ ಪಟ್ಟಿಯಲ್ಲಿ ಈವರೆಗೂ ಆಸ್ಟ್ರೇಲಿಯಾದ ಆ್ಯಡಮ್ ಗಿಲ್ ಕ್ರಿಸ್ಟ್ ಇದ್ದರು. ಅವರು 100 ಸಿಕ್ಸರ್ ಬಾರಿಸಲು 130 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಪಂತ್ ಈ ಸಾಧನೆಯನ್ನು ಕೇವಲ 89 ಇನ್ನಿಂಗ್ಸ್ ಗಳಲ್ಲೇ ಮಾಡಿದ್ದಾರೆ
| ಟೆಸ್ಟ್ ಕ್ರಿಕೆಟ್ ನಲ್ಲಿ ಸಿಕ್ಸರ್ ಮೈಲಿಗಲ್ಲು | ||
|---|---|---|
| ಆಟಗಾರ | ತಂಡ | ಇನ್ನಿಂಗ್ಸ್ |
| ರಿಷಭ್ ಪಂತ್ | ಭಾರತ | 89 |
| ಆ್ಯಡಂ ಗಿಲ್ಕ್ರಿಸ್ಟ್ | ಆಸ್ಟ್ರೇಲಿಯಾ | 130 |
| ಬೆನ್ ಸ್ಟೋಕ್ಸ್ | ಇಂಗ್ಲೆಂಡ್ | 151 |
| ಬ್ರೆಂಡನ್ ಮೆಕಲಂ | ನ್ಯೂಜಿಲೆಂಡ್ | 170 |
ವಿಶ್ವದ ಗಣ್ಯರ ಪಟ್ಟಿಗೆ ಸೇರಿದ ಪಂತ್
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್ ಬಾರಿಸಿದ ವಿಶ್ವದ ಕೇವಲ 4ನೇ ಬ್ಯಾಟರ್ ಎಂಬ ಕೀರ್ತಿಗೆ ಪಂತ್ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಇಂಗ್ಲೆಂಡ್ ನ ಮಾಜಿ ನಾಯಕ ಬೆನ್ ಸ್ಟೋಕ್ಸ್ 138 ಸಿಕ್ಸರ್ ಗಳೊಂದಿಗೆ ಪ್ರಥಮ ಸ್ಥಾನದಲ್ಲಿದ್ದಾರೆ. 107 ಸಿಕ್ಸರ್ ಗಳನ್ನು ಸಿಡಿಸಿರುವ ನ್ಯೂಜಿಲೆಂಡ್ ನ ಮಾಜಿ ಸ್ಫೋಟಕ ಬ್ಯಾಟರ್ ಬ್ರೆಂಡನ್ ಮೆಕಲಂ ಎರಡನೇ ಸ್ಥಾನದಲ್ಲಿದ್ದಾರೆ. ತಲಾ 100 ಸಿಕ್ಸರ್ ಗಳನ್ನು ಬಾರಿಸಿರುವ ರಿಷಬ್ ಪಂತ್ ಮತ್ತು ಗಿಲ್ ಕ್ರಿಸ್ಟ್ ಜಂಟಿ 3ನೇ ಸ್ಥಾನದಲ್ಲಿದ್ದಾರೆ. ಮೆಕಲಂ ಅವರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಲು ರಿಷಬ್ ಪಂತ್ ಅವರಿಗೆ ಇನ್ನು ಕೇವಲ 8 ಸಿಕ್ಸರ್ ಗಳ ಅವಶ್ಯಕತೆ ಇದೆ.
| ಬ್ಯಾಟರ್ | ತಂಡ | ಸಿಕ್ಸರ್ಗಳು |
| ಬೆನ್ ಸ್ಟೋಕ್ಸ್ | ಇಂಗ್ಲೆಂಡ್ | 138 |
| ಬ್ರೆಂಡನ್ ಮೆಕಲಂ | ನ್ಯೂಜಿಲೆಂಡ್ | 107 |
| ರಿಷಭ್ ಪಂತ್ | ಭಾರತ | 100* |
| ಆಡಮ್ ಗಿಲ್ಕ್ರಿಸ್ಟ್ | ಆಸ್ಟ್ರೇಲಿಯಾ | 100 |
ಎಸೆತಗಳ ಆಧಾರದಲ್ಲೂ ಪಂತ್ ನಂಬರ್ 1
ಎಸೆತಗಳ ಆಧಾರದಲ್ಲಿ (Balls per Six) ಸಿಕ್ಸರ್ ಗಳಿಸುವ ವಿಷಯದಲ್ಲೂ ಪಂತ್ ಇತರರಿಗಿಂತ ಬಹುದೂರ ಮುಂದಿದ್ದಾರೆ. ರಿಷಭ್ ಪಂತ್ ಸರಾಸರಿ ತಿ 49.2 ಎಸೆತಗಳಿಗೆ ಒಂದು ಸಿಕ್ಸರ್ ಬಾರಿಸಿದ್ದಾರೆ. ಆಡಮ್ ಗಿಲ್ಕ್ರಿಸ್ಟ್ ಅವರು ಪ್ರತಿ 67.92 ಎಸೆತಗಳಿಗೆ ಒಂದು ಸಿಕ್ಸರ್ ಬಾರಿಸಿದ್ದಾರೆ. ಬೆನ್ ಸ್ಟೋಕ್ಸ್ ಅವರು ಪ್ರತಿ 90.05 ಎಸೆತಗಳಿಗೆ ಒಂದು ಸಿಕ್ಸರ್ ಬಾರಿಸಿದ್ದರೆ, ಬ್ರೆಂಡನ್ ಮೆಕಲಂ ಅವರು ಪ್ರತಿ 93.39 ಎಸೆತಗಳಿಗೆ ಒಂದು ಸಿಕ್ಸರ್ ಬಾರಿಸಿದ್ದಾರೆ. ಪಂತ್ ಇವರೆಲ್ಲರಿಗಿಂತ ಮುಂದಿದ್ದು ಸದ್ಯಕ್ಕೆ ಈ ದಾಖಲೆಯನ್ನು ಮುರಿಯಬಲ್ಲ ಮತ್ತೊಬ್ಬ ಬ್ಯಾಟರ್ ಇಲ್ಲ.



