ಆಹಾರ ಇಲಾಖೆ ನೂತನ ಸಚಿವ ರಿಜ್ವಾನ್ ಅರ್ಷದ್ ಪಡಿತರ ಚೀಟಿ ಪರಿಷ್ಕರಣೆ ಹಾಗೂ ಬಿಪಿಎಲ್ ಕಾರ್ಡ್ ರದ್ದತಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಸೆ.30ರೊಳಗೆ ಇ -ಕೆವೈಸಿ ಕಡ್ಡಾಯಗೊಳಿಸಿದ್ದು, ಅನ್ನಭಾಗ್ಯ ಅಕ್ಕಿ ಕಾಳಸಂತೆ ತಡೆಗೆ ಜಿಪಿಎಸ್ ಮತ್ತು ಸಿಸಿಟಿವಿ ಅಳವಡಿಸಲು ನಿರ್ಧರಿಸಿದ್ದಾರೆ. ಬಯೋಮೆಟ್ರಿಕ್ ಪಡೆದ ತಕ್ಷಣ ಪಡಿತರ ವಿತರಿಸದ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಹೈಲೈಟ್ಸ್:
- ಬಿಪಿಎಲ್ ಪಡಿತರ ಚೀಟಿಗಳ ಪರಿಷ್ಕರಣೆ ಕಾರ್ಯವನ್ನು ತಾತ್ಕಾಲಿಕವಾಗಿ ತಡೆಹಿಡಿಯಲು ಆಹಾರ ಸಚಿವ ರಿಜ್ವಾನ್ ಅರ್ಷದ್ ಸೂಚನೆ.
- ಬಿಪಿಎಲ್ ಕಾರ್ಡ್ಗಳ ರದ್ದು ಕಾರ್ಯವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದ ನೂತನ ಸಚಿವ.
- ಸೆಪ್ಟೆಂಬರ್ 30 ರೊಳಗೆ ಒಟ್ಟು 2.65 ಕೋಟಿ ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಇಕೆವೈಸಿ ಮಾಡಿಸಿಕೊಳ್ಳಬೇಕು

ನೂತನ ಸಚಿವರಾಗಿ ಅಧಿಕಾರ ವಹಿಸಿಕೊಂಡು ಮಾತನಾಡಿ, ”ಮಾನದಂಡ ಉಲ್ಲಂಘಿಘಿಸಿ ಪಡೆದಿರುವ 7.65 ಲಕ್ಷ ಕಾರ್ಡ್ಗಳನ್ನು ಕೇಂದ್ರ ಸರಕಾರವು ‘ಶಂಕಾಸ್ಪದ ಪಟ್ಟಿ’ಗೆ ಸೇರಿಸಿ ರಾಜ್ಯಕ್ಕೆ ಸಲ್ಲಿಸಿತ್ತು. ಇಲಾಖೆ ಅಧಿಕಾರಿಗಳು ಇವುಗಳನ್ನು ಪರಿಶೀಲಿಸಿ 3.50 ಲಕ್ಷ ಅನರ್ಹ ಕಾರ್ಡ್ಗಳನ್ನು ಎಪಿಎಲ್ಗೆ ಪರಿವರ್ತಿಸಲಾಗಿದೆ. ಉಳಿದ ಕಾರ್ಡ್ಗಳ ಪರಿಶೀಲನೆ ಕಾರ್ಯ ನಡೆಯುತ್ತಿತ್ತು. ಆದರೆ, ಸಾರ್ವಜನಿಕರ ಹಿತದೃಷ್ಟಿಯಿಂದ ಕಾರ್ಡ್ಗಳ ಪರಿಷ್ಕರಣೆ ಹಾಗೂ ಬಿಪಿಎಲ್ ಕಾರ್ಡ್ಗಳ ರದ್ದು ಕಾರ್ಯವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ,” ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸೆಪ್ಟೆಂಬರ್ 30ರೊಳಗೆ ಇಕೆವೈಸಿ ಮಾಡಿಸಿ
”5 ವರ್ಷದ ಬಳಿಕ ರಾಜ್ಯದಲ್ಲಿ ಬೋಗಸ್ ಕಾರ್ಡ್ ಪತ್ತೆ, ಪಡಿತರ ಸೋರಿಕೆ ತಡೆಗಾಗಿ ಪಡಿತರ ಚೀಟಿಗಳ ಇ-ಕೆವೈಸಿ ಮಾಡುತ್ತಿದ್ದೇವೆ. ಇದರಲ್ಲಿಎಷ್ಟು ಕಾರ್ಡ್ಗಳು ರದ್ದಾಗುತ್ತವೆ ಎಂಬುದನ್ನು ನೋಡಿಕೊಂಡು ಹೊಸ ಫಲಾನುಭವಿಗಳಿಗೆ ಅವಕಾಶ ಮಾಡಿಕೊಡುತ್ತೇವೆ. ಸೆ.30 ರೊಳಗೆ ಒಟ್ಟು 2.65 ಕೋಟಿ ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಇಕೆವೈಸಿ ಮಾಡಿಸಿಕೊಳ್ಳಬೇಕು. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅನರ್ಹ ಕಾರ್ಡ್ಗಳ ಪ್ರಮಾಣ ತಿಳಿಯಲಿದೆ. ಎಷ್ಟು ಕಾರ್ಡ್ಗಳು ರದ್ದಾಗುತ್ತವೆಯೋ ಅದರ ಆಧಾರದ ಮೇಲೆ ಅರ್ಹ ಫಲಾನುಭವಿಗಳಿಗೆ ಹೊಸದಾಗಿ ಕಾರ್ಡ್ ನೀಡಲಾಗುವುದು,” ಎಂದರು.
”ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (ಎನ್ಎಫ್ಎಸ್ಎ) ಅನ್ವಯ ರಾಜ್ಯದಲ್ಲಿಇನ್ನೂ 50 ಲಕ್ಷ ಜನರಿಗೆ ಬಿಪಿಎಲ್ ಕಾರ್ಡ್ ಸೌಲಭ್ಯ ಸಿಗಬೇಕಿತ್ತು. ಈ ಕುರಿತು ಕೇಂದ್ರ ಸರಕಾರದ ಗಮನಕ್ಕೆ ತರಲಾಗುವುದು. ಹೊಸ ಕಾರ್ಡ್ ನೀಡುವುದನ್ನು ಕೇಂದ್ರ ನಿರ್ಬಂಧಿಸಿರುವುದರಿಂದ ಹೊಸ ಕಾರ್ಡ್ ವಿತರಣೆ ಮಾಡುತ್ತಿಲ್ಲ,” ಎಂದು ಸಚಿವರು ಸ್ಪಷ್ಟಪಡಿಸಿದರು.
”ಪೋಷಕಾಂಶ ಪದಾರ್ಥ ಹೊಂದಿರುವ ‘ಇಂದಿರಾ ಕಿಟ್’ ವಿತರಣೆಯು ದೊಡ್ಡ ಯೋಜನೆಯಾಗಿದೆ. ಈ ಯೋಜನೆ ಜಾರಿಗೆ ಸಂಬಂಧಿಸಿದಂತೆ ವರ್ಷದಿಂದ ಅಧಿಕಾರಿಗಳು ತಳಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಇನ್ನಷ್ಟು ಕಾರ್ಯಗಳಾಗಬೇಕಿದೆ. ಆಹಾರ ಧಾನ್ಯಗಳ ಬೆಲೆ ಏರಿಕೆ, ಗುಣಮಟ್ಟ ಕುರಿತು ಸಿಎಂ ಜತೆ ಚರ್ಚಿಸಲಾಗುವುದು. ನಮ್ಮ ಸರಕಾರವು ಹಿಂದೆ ಘೋಷಿಸಿದಂತೆ ಯೋಜನೆ ಜಾರಿಗೆ ತರಲಿದೆ,” ಎಂದು ಅವರು ಭರವಸೆ ನೀಡಿದರು.
ಅಕ್ಕಿ ಕಾಳಸಂತೆ ತಡೆಗೆ ಕ್ರಮ
”ಅನ್ನಭಾಗ್ಯದ ಅಕ್ಕಿ ಕಾಳಸಂತೆಯಲ್ಲಿನ ಮಾರಾಟಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುವುದು. ಎಲ್ಲಗೋದಾಮುಗಳಲ್ಲಿಸಿಸಿಟಿವಿ, ಆಹಾರ ಸಾಮಗ್ರಿಗಳ ಸರಬರಾಜು ವಾಹನಗಳಿಗೆ ಜಿಪಿಎಸ್ ಹಾಕಲಾಗುವುದು. ಗೋದಾಮು ಮತ್ತು ಟ್ರಾನ್ಸ್ಪೋರ್ಟ್ ನಿರ್ವಹಣೆಗೆ ಕಮಾಂಡ್ ಆಂಡ್ ಕಂಟ್ರೋಲ್ ಸೆಂಟರ್ ಸ್ಥಾಪಿಸಲಾಗುವುದು. ಇದರಿಂದ ಕಳ್ಳಸಾಗಣೆ, ಕಾಳಸಂತೆ ಮಾರಾಟ ತಡೆಯಲು ಅನುಕೂಲವಾಗಲಿದೆ,” ಎಂದು ಸ್ಪಷ್ಟ ಪಡಿಸಿದರು.
”ಆಹಾರ ಇಲಾಖೆ ಜವಾಬ್ದಾರಿ ಅತ್ಯಂತ ಮಹತ್ವದ್ದು. ಸಿಎಂ ಈ ಹೊಣೆ ನೀಡಿದ್ದು, ಇದನ್ನು ಡೈನಮಿಕ್ ಇಲಾಖೆಯಾಗಿ ಮುಂದುವರಿಸಿಕೊಂಡು ಹೋಗುತ್ತೇನೆ. ಸಿದ್ದರಾಮಯ್ಯ ಮೊದಲ ಅವಧಿಯಲ್ಲಿಅನ್ನಭಾಗ್ಯ ಕೊಟ್ಟಿದ್ದರು. ಈಗ ಇದು ಗ್ಯಾರಂಟಿಯಾಗಿದೆ. ಪಡಿತರ ಚೀಟಿ ಪರಿಷ್ಕರಣೆಗೆ ಕೇಂದ್ರ ಸರಕಾರದಿಂದಲೇ ಪಟ್ಟಿ ಬಂದಿದೆ.
ಬೆರಳಚ್ಚು ಪಡೆದ ತಕ್ಷಣ ಪಡಿತರ ವಿತರಿಸದಿದ್ದರೆ ಕ್ರಮ
ಬೆರಳಚ್ಚು (ಬಯೋಮೆಟ್ರಿಕ್) ನೀಡಿದ ತಕ್ಷಣವೇ ನ್ಯಾಯಬೆಲೆ ಅಂಗಡಿಗಳು ಪಡಿತರ ಕಾರ್ಡ್ದಾರರಿಗೆ ಪಡಿತರ ವಿತರಿಸಬೇಕು. ಇಲ್ಲದಿದ್ದರೆ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಆಹಾರ ಇಲಾಖೆ ಎಚ್ಚರಿಕೆ ನೀಡಿದೆ.
ಕೆಲವು ನ್ಯಾಯಬೆಲೆ ಅಂಗಡಿಗಳ ಮಾಲೀಕರು ತಿಂಗಳಲ್ಲಿ ಕೆಲವು ದಿನಗಳಲ್ಲಿ ಮಾತ್ರ ಅಂಗಡಿ ತೆರೆಯುತ್ತಿವೆ. ಇನ್ನೂ ಕೆಲವು ನ್ಯಾಯಬೆಲೆ ಅಂಗಡಿಗಳು ಫಲಾನುಭವಿಗಳಿಂದ ಒಂದು ದಿನ ಬಯೋಮೆಟ್ರಿಕ್ ಪಡೆದು ಕೆಲವು ದಿನಗಳ ನಂತರ ಪಡಿತರ ಧಾನ್ಯ ನೀಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಇದು ನಿಯಮ ಬಾಹಿರವಾಗಿದೆ. ಬೆರಳಚ್ಚು ಪಡೆದು ಪಡಿತರ ನೀಡದೆ ಕಾಯಿಸುವುದು ಅಥವಾ ಕೆಲವು ದಿನಗಳ ನಂತರ ಧಾನ್ಯ ವಿತರಿಸುವುದು ಕಂಡು ಬಂದಲ್ಲಿಅಂತಹ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜಂಟಿ, ಉಪ ನಿರ್ದೇಶಕರಿಗೆ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸುವ ಮೂಲಕ ಸೂಚಿಸಿದ್ದಾರೆ.
ಸಂತೋಷದಿಂದ ಧ್ವಜಾರೋಹಣ
”ಸ್ವಾತಂತ್ರ್ಯ ದಿನಾಚರಣೆಯಂದು ಉಡುಪಿ ಜಿಲ್ಲೆಯಲ್ಲಿಧ್ವಜಾರೋಹಣ ಮಾಡುವ ಅವಕಾಶ ಸಿಕ್ಕಿದೆ. ಬಹಳ ಖುಷಿ ಮತ್ತು ಸಂತೋಷದಿಂದ ಧ್ವಜಾರೋಹಣ ಮಾಡಲು ತೆರಳುತ್ತಿದ್ದೇನೆ,” ಎಂದು ಸಚಿವ ರಿಜ್ವಾನ್ ಅರ್ಷದ್ ಹೇಳಿದರು.



