ರಾಜ್ಯದ ಯೋಜನೆ ಮತ್ತು ಸಾಂಖಿಕ ಇಲಾಖೆ ಸಚಿವ ಡಿ.ಸುಧಾಕರ್ ಅವರ ಶ್ವಾಸಕೋಶದ ಸೋಂಕು ಉಲ್ಬಣವಾಗಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಸದ್ಯ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದ್ದು, ಇದೀಗ ಶ್ವಾಸಕೋಶ ಕಸಿ ಮಾಡಲು ವೈದ್ಯರು ಸಿದ್ದತೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.
ಹೈಲೈಟ್ಸ್:
- ಕರ್ನಾಟಕದ ಸಚಿವ ಡಿ.ಸುಧಾಕರ್ ಅವರ ಆರೋಗ್ಯದಲ್ಲಿ ಏರುಪೇರು
- ಶ್ವಾಸಕೋಶ ಸೋಂಕಿನಿಂದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ, ಆರೋಗ್ಯ ಸ್ಥಿತಿ ಗಂಭೀರ
- ಶ್ವಾಸಕೋಶ ಕಸಿ ಮಾಡಲು ವೈದ್ಯರ ಸಿದ್ದತೆ

ಸಚಿವ ಡಿ.ಸುಧಾಕರ್ ಅವರಿಗೆ ಶ್ವಾಸಕೋಶ ಸೋಂಕು, ಸ್ಥಿತಿ ಗಂಭೀರ
ಇತ್ತೀಚೆಗಷ್ಟೇ ಮೊಣಕಾಲು ಸಂಬಂಧ ಆಪರೇಷನ್ ಒಂದರ ಸಲುವಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ಶಸ್ತ್ರಚಿಕಿತ್ಸೆಯ ಬಳಿಕ ಅವರಿಗೆ ಶ್ವಾಸಕೋಶ ಸೋಂಕು ಕಾಣಿಸಿಕೊಂಡಿದ್ದು, ಇದು ಇದ್ದಕ್ಕಿದ್ದಂತೆ ಉಲ್ಬಣವಾಗಿದೆ. ಈ ಹಿನ್ನಲೆಯಲ್ಲಿ ಅವರನ್ನು ಮಣಿಪಾಲ್ ಆಸ್ಪತ್ರೆಯಿಂದ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿಲಾಗುತ್ತಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಶ್ವಾಸಕೋಶದ ಸೋಂಕು ಹೆಚ್ಚಾಗಿದ್ದು, ಇದೀಗ ಸಚಿವ ಡಿ.ಸುಧಾಕರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಕಿಮ್ಸ್ ನ ತೀವ್ರ ನಿಗಾ ಘಟಕದಲ್ಲಿ (ICU) ವೆಂಟಿಲೇಟರ್ ಅಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ನುರಿತ ವೈದ್ಯರ ತಂಡವು ಅವರ ಆರೋಗ್ಯದ ಮೇಲೆ 24 ಗಂಟೆಗಳ ಕಾಲ ನಿರಂತರ ನಿಗಾ ಇರಿಸಿದೆ ಎಂದು ತಿಳಿದುಬಂದಿದೆ.
ಶ್ವಾಸಕೋಶ ಕಸಿಗೆ ವೈದ್ಯರ ಸಿದ್ದತೆ
ಇನ್ನು, ಡಿ. ಸುಧಾಕರ್ ಅವರ ಆರೋಗ್ಯವನ್ನು ಪರಿಶೀಲನೆ ನಡೆಸಿರುವ ವೈದ್ಯರ ತಂಡ ಇದೀಗ ಅವರಿಗೆ ಶ್ವಾಸಕೋಶ ಕಸಿ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಶ್ವಾಸಕೋಶ ಸೋಂಕಿನಿಂದಾಗಿ ಗಂಭೀರ ಸ್ಥಿತಿಯಲ್ಲಿರುವ ಡಿ.ಸುಧಾಕರ್ ಅವರಿಗೆ ಶ್ವಾಸಕೋಶ ಕಸಿ ಮಾಡುವ ಶಸ್ತ್ರಚಿಕಿತ್ಸೆಗೆ ವೈದ್ಯರು ಸಿದ್ದತೆ ಮಾಡಿಕೊಂಡಿದ್ದಾರೆ. ಈ ನಿಟ್ಟನಲ್ಲಿ ಡಾ.ವೆಂಕಟಗಿರಿ ನೇತೃತ್ವದಲ್ಲಿ ಲಂಗ್ಸ್ ಟ್ರಾನ್ಸ್ ಪ್ಲಾಂಟೇಷನ್ ಸರ್ಜರಿ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
CM ಮತ್ತು DCM ಭೇಟಿಯಾಗಿ ಆರೋಗ್ಯ ಸ್ಥಿತಿ ವಿಚಾರಣೆ
ಇನ್ನು, ಡಿ.ಸುಧಾಕರ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಕಾಂಗ್ರೆಸ್ ನಾಯಕರುಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ಆಸ್ಪತ್ರೆಗೆ ತೆರಳಿ, ಸುಧಾಕರ್ ಅವರ ಆರೋಗ್ಯದ ಸ್ಥಿತಿಗತಿಯನ್ನು ವೈದ್ಯರಿಂದ ವಿಚಾರಿಸಿದ್ದಾರೆ ಎಂದು ತಿಳಿದುಬಂದಿದೆ.
ಸಚಿವರ ಆರೋಗ್ಯ ಸ್ಥಿತಿ ವಿಷಮವಾಗಿದ್ದು, ಕಳೆದ 48 ಗಂಟೆಗಳಲ್ಲಿ ಅವರ ಅಂಗಾಂಗಗಳ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಯ ಕಂಡುಬರುತ್ತಿದೆ ಎನ್ನಲಾಗಿದೆ.ಇನ್ನು, ಸಚಿವರ ಆರೋಗ್ಯ ಸ್ಥಿತಿಯ ಬಗ್ಗೆ ಕಿಮ್ಸ್ ಆಸ್ಪತ್ರೆಯ ತಜ್ಞ ವೈದ್ಯರ ಮಂಡಳಿ ಬುಲೆಟಿನ್ ಬಿಡುಗಡೆ ಮಾಡುವ ಸಾಧ್ಯತೆ ಇದೆ.



