ಶರವೇಗದ ಸಿಕ್ಸರ್ ಶತಕ; ಗಿಲ್ ಕ್ರಿಸ್ಟ್ ವಿಶ್ವದಾಖಲೆ ಧೂಳೀಪಟ! ಟೆಸ್ಟ್ ಕ್ರಿಕೆಟ್‌ನಲ್ಲಿ ರಿಷಬ್ ಪಂತ್ ಹೊಸ ಇತಿಹಾಸ – india vs sri lanka rishabh pant becomes fastest batter to reach 100 test sixes


Rishabh Pant Sixers Record- ಶ್ರೀಲಂಕಾದ ಗಾಲೆಯಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ 100 ಸಿಕ್ಸರ್ ಪೂರೈಸಿದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ. ಲಹಿರು ಕುಮಾರ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಕೇವಲ 89 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದ ಪಂತ್, ಆಸ್ಟ್ರೇಲಿಯಾದ ಆ್ಯಡಮ್ ಗಿಲ್‌ಕ್ರಿಸ್ಟ್ (130 ಇನ್ನಿಂಗ್ಸ್) ಅವರ ವಿಶ್ವದಾಖಲೆಯನ್ನು ಧೂಳೀಪಟ ಮಾಡಿದ್ದಾರೆ. ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 66 ರನ್ ಗಳಿಸಿದ ಅವರು, ಟೆಸ್ಟ್‌ನಲ್ಲಿ 100 ಸಿಕ್ಸರ್ ಬಾರಿಸಿದ ವಿಶ್ವದ 4ನೇ ಬ್ಯಾಟರ್ ಹಾಗೂ ಅತ್ಯಂತ ಕಡಿಮೆ ಎಸೆತಗಳಲ್ಲಿ ಈ ಸಾಧನೆ ಮಾಡಿದ ಆಟಗಾರರಾಗಿದ್ದಾರೆ.

ಹೈಲೈಟ್ಸ್‌:

  • ಕೇವಲ 89 ಇನ್ನಿಂಗ್ಸ್‌ಗಳಲ್ಲಿ 100 ಟೆಸ್ಟ್ ಸಿಕ್ಸರ್ ಪೂರೈಸಿ, ಆ್ಯಡಮ್ ಗಿಲ್‌ಕ್ರಿಸ್ಟ್ ಅವರ ವಿಶ್ವದಾಖಲೆ ಮುರಿದ ರಿಷಭ್ ಪಂತ್.
  • ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 100 ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ಹಾಗೂ ವಿಶ್ವದ 4ನೇ ಬ್ಯಾಟರ್ ಎಂಬ ಹೆಗ್ಗಳಿಕೆ.
  • ಪ್ರತಿ 49.2 ಎಸೆತಗಳಿಗೆ ಒಂದು ಸಿಕ್ಸರ್ ಬಾರಿಸುವ ಮೂಲಕ ಅತ್ಯಂತ ವೇಗವಾಗಿ ಸಿಕ್ಸ್ ಗಳಿಸಿದ ದಾಖಲೆಯೂ ಪಂತ್ ಪಾಲು.
Rishabh Pant (5)
ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ನೂರು ಶತಕಗಳ ಮೈಲಿಗಲ್ಲು ತಲುಪಿದ ಭಾರತದ ವಿಕೆಟ್ ಕೀಪರ್ ಬ್ಯಾಟರ್ ರಿಷಹ್ ಪಂತ್.(Photo- X/BCCI)(ಗ್ಯಾಲರಿ– Vijaya Karnataka Web)
ಗಾಲೆ: ಪಂದ್ಯದಿಂದ ಪಂದ್ಯಕ್ಕೆ ಟೆಸ್ಟ್ ಕ್ರಿಕೆಟ್ ಸ್ಪೆಷಲಿಸ್ಟ್ ಆಗಿ ಬೆಳೆಯುತ್ತಿರುವ ಭಾರತದ ವಿಕೆಟ್‌ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರು ಇದೀಗ ಅಪರೂಪದ ಚಾರಿತ್ರಿಕ ಮೈಲಿಗಲ್ಲು ನೆಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 100 ಸಿಕ್ಸರ್‌ಗಳನ್ನು ಪೂರೈಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಇದೀಗ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ ಆಸ್ಟ್ರೇಲಿಯಾದ ಮಾಜಿ ಸ್ಟಾರ್ ವಿಕೆಟ್ ಕೀಪರ್ ಆ್ಯಡಮ್ ಗಿಲ್‌ ಕ್ರಿಸ್ಟ್ ಅವರ ದಾಖಲೆಯನ್ನು ಉರುಳಿಸಿ, ವಿಶ್ವ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 100 ಸಿಕ್ಸರ್ ಬಾರಿಸಿದ ಬ್ಯಾಟರ್ ಎಂಬ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಗಾಲೆಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 4ನೇ ದಿನದಾಟದಲ್ಲಿ ಪಂತ್ ಈ ಸಾಧನೆ ಮಾಡಿದ್ದಾರೆ.

ಶ್ರೀಲಂಕಾ ವೇಗಿ ಲಹಿರು ಕುಮಾರ ಎಸೆದ ಚೆಂಡನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಲಾಂಲ್ ಲೆಗ್ ಮೇಲೆ ಬೃಹತ್ ಸಿಕ್ಸರ್‌ಗೆ ಅಟ್ಟುವ ಮೂಲಕ ಪಂತ್ ಈ ಐತಿಹಾಸಿಕ ಸಾಧನೆ ಮಾಡಿದರು. ಈ ಆಕರ್ಷಕ ಸಿಕ್ಸರ್‌ನೊಂದಿಗೆ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ 20ನೇ ಅರ್ಧಶತಕವನ್ನೂ ಪೂರೈಸಿದರು. ಪ್ರಥಮ ಇನ್ನಿಂಗ್ಸ್ ನಲ್ಲಿ ಉಪಯುಕ್ತ 39 ರನ್ ಗಳಿಸಿದ್ದ ಅವರು ಎರಡನೇ ಇನ್ನಿಂಗ್ಸ್ ನಲ್ಲಿ ಔಟಾಗುವ ಮುನ್ನ 69 ಎಸೆತಗಳಲ್ಲಿ 66 ರನ್ ಬಾರಿಸಿದರು. ಅದರಲ್ಲಿ 8 ಆಕರ್ಷಕ ಬೌಂಡರಿ ಮತ್ತು 2 ಭರ್ಜರಿ ಸಿಕ್ಸರ್ ಗಳಿದ್ದವು.

(ಸ್ಕೋರ್ ಕಾರ್ಡ್)

ಆಡಮ್ ಗಿಲ್‌ಕ್ರಿಸ್ಟ್ ದಾಖಲೆ ಧೂಳಿಪಟ

ಟೆಸ್ಟ್‌ ಕ್ರಿಕೆಟ್ ನಲ್ಲಿ ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 100 ಸಿಕ್ಸರ್ ತಲುಪಿದ ಆಟಗಾರರ ಪಟ್ಟಿಯಲ್ಲಿ ಈವರೆಗೂ ಆಸ್ಟ್ರೇಲಿಯಾದ ಆ್ಯಡಮ್ ಗಿಲ್ ಕ್ರಿಸ್ಟ್ ಇದ್ದರು. ಅವರು 100 ಸಿಕ್ಸರ್ ಬಾರಿಸಲು 130 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಪಂತ್ ಈ ಸಾಧನೆಯನ್ನು ಕೇವಲ 89 ಇನ್ನಿಂಗ್ಸ್ ಗಳಲ್ಲೇ ಮಾಡಿದ್ದಾರೆ

ಟೆಸ್ಟ್ ಕ್ರಿಕೆಟ್ ನಲ್ಲಿ ಸಿಕ್ಸರ್ ಮೈಲಿಗಲ್ಲು
ಆಟಗಾರತಂಡಇನ್ನಿಂಗ್ಸ್
ರಿಷಭ್ ಪಂತ್ಭಾರತ89
ಆ್ಯಡಂ ಗಿಲ್‌ಕ್ರಿಸ್ಟ್ಆಸ್ಟ್ರೇಲಿಯಾ130
ಬೆನ್ ಸ್ಟೋಕ್ಸ್ಇಂಗ್ಲೆಂಡ್151
ಬ್ರೆಂಡನ್ ಮೆಕಲಂನ್ಯೂಜಿಲೆಂಡ್170

ವಿಶ್ವದ ಗಣ್ಯರ ಪಟ್ಟಿಗೆ ಸೇರಿದ ಪಂತ್

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್ ಬಾರಿಸಿದ ವಿಶ್ವದ ಕೇವಲ 4ನೇ ಬ್ಯಾಟರ್ ಎಂಬ ಕೀರ್ತಿಗೆ ಪಂತ್ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಇಂಗ್ಲೆಂಡ್ ನ ಮಾಜಿ ನಾಯಕ ಬೆನ್ ಸ್ಟೋಕ್ಸ್ 138 ಸಿಕ್ಸರ್ ಗಳೊಂದಿಗೆ ಪ್ರಥಮ ಸ್ಥಾನದಲ್ಲಿದ್ದಾರೆ. 107 ಸಿಕ್ಸರ್ ಗಳನ್ನು ಸಿಡಿಸಿರುವ ನ್ಯೂಜಿಲೆಂಡ್ ನ ಮಾಜಿ ಸ್ಫೋಟಕ ಬ್ಯಾಟರ್ ಬ್ರೆಂಡನ್ ಮೆಕಲಂ ಎರಡನೇ ಸ್ಥಾನದಲ್ಲಿದ್ದಾರೆ. ತಲಾ 100 ಸಿಕ್ಸರ್ ಗಳನ್ನು ಬಾರಿಸಿರುವ ರಿಷಬ್ ಪಂತ್ ಮತ್ತು ಗಿಲ್ ಕ್ರಿಸ್ಟ್ ಜಂಟಿ 3ನೇ ಸ್ಥಾನದಲ್ಲಿದ್ದಾರೆ. ಮೆಕಲಂ ಅವರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಲು ರಿಷಬ್ ಪಂತ್ ಅವರಿಗೆ ಇನ್ನು ಕೇವಲ 8 ಸಿಕ್ಸರ್ ಗಳ ಅವಶ್ಯಕತೆ ಇದೆ.

ಬ್ಯಾಟರ್ತಂಡಸಿಕ್ಸರ್‌ಗಳು
ಬೆನ್ ಸ್ಟೋಕ್ಸ್ಇಂಗ್ಲೆಂಡ್138
ಬ್ರೆಂಡನ್ ಮೆಕಲಂನ್ಯೂಜಿಲೆಂಡ್107
ರಿಷಭ್ ಪಂತ್ಭಾರತ100*
ಆಡಮ್ ಗಿಲ್‌ಕ್ರಿಸ್ಟ್ಆಸ್ಟ್ರೇಲಿಯಾ100

ಎಸೆತಗಳ ಆಧಾರದಲ್ಲೂ ಪಂತ್ ನಂಬರ್ 1

ಎಸೆತಗಳ ಆಧಾರದಲ್ಲಿ (Balls per Six) ಸಿಕ್ಸರ್ ಗಳಿಸುವ ವಿಷಯದಲ್ಲೂ ಪಂತ್ ಇತರರಿಗಿಂತ ಬಹುದೂರ ಮುಂದಿದ್ದಾರೆ. ರಿಷಭ್ ಪಂತ್ ಸರಾಸರಿ ತಿ 49.2 ಎಸೆತಗಳಿಗೆ ಒಂದು ಸಿಕ್ಸರ್ ಬಾರಿಸಿದ್ದಾರೆ. ಆಡಮ್ ಗಿಲ್‌ಕ್ರಿಸ್ಟ್ ಅವರು ಪ್ರತಿ 67.92 ಎಸೆತಗಳಿಗೆ ಒಂದು ಸಿಕ್ಸರ್ ಬಾರಿಸಿದ್ದಾರೆ. ಬೆನ್ ಸ್ಟೋಕ್ಸ್ ಅವರು ಪ್ರತಿ 90.05 ಎಸೆತಗಳಿಗೆ ಒಂದು ಸಿಕ್ಸರ್ ಬಾರಿಸಿದ್ದರೆ, ಬ್ರೆಂಡನ್ ಮೆಕಲಂ ಅವರು ಪ್ರತಿ 93.39 ಎಸೆತಗಳಿಗೆ ಒಂದು ಸಿಕ್ಸರ್ ಬಾರಿಸಿದ್ದಾರೆ. ಪಂತ್ ಇವರೆಲ್ಲರಿಗಿಂತ ಮುಂದಿದ್ದು ಸದ್ಯಕ್ಕೆ ಈ ದಾಖಲೆಯನ್ನು ಮುರಿಯಬಲ್ಲ ಮತ್ತೊಬ್ಬ ಬ್ಯಾಟರ್ ಇಲ್ಲ.

ಗಣೇಶ್ ಪ್ರಸಾದ್ ಕುಂಬ್ಳೆ

ಲೇಖಕರ ಬಗ್ಗೆಗಣೇಶ್ ಪ್ರಸಾದ್ ಕುಂಬ್ಳೆವಿಜಯ ಕರ್ನಾಟಕದ ವೆಬ್ ಸೈಟ್ ವಿಭಾಗದಲ್ಲಿ ಸೀನಿಯರ್ ಡಿಜಿಟಲ್ ಕಂಟೆಂಟ್ ಪ್ರೊಡ್ಯೂಸರ್ ಆಗಿ ಕಳೆದ 3 ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ಗಣೇಶ್ ಪ್ರಸಾದ್ ಕುಂಬ್ಳೆ ಅವರು ಪತ್ರಿಕೋದ್ಯಮದಲ್ಲಿ 18 ವರ್ಷಗಳ ಅನುಭವ ಹೊಂದಿದ್ದಾರೆ. ಈ ಹಿಂದೆ ರಾಜ್ಯ, ಕ್ರೀಡೆ, ಪುರವಣಿ ಹೀಗೆ ಸುದ್ದಿಮನೆಯ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿರುವ ಇವರು ಪ್ರಸ್ತುತ ವಿಜಯ ಕರ್ನಾಟಕ ವೆಬ್ ಸೈಟ್ ನ ಕ್ರೀಡಾ ವಿಭಾಗವನ್ನು ನಿರ್ವಹಿಸುತ್ತಿದ್ದಾರೆ.

ಪದವಿ ವ್ಯಾಸಂಗವನ್ನು ಪತ್ರಿಕೋದ್ಯಮದ ಗರಡಿ ಮನೆ ಎಂದೇ ಹೆಸರಾದ ಉಜಿರೆ ಎಸ್ ಡಿಎಂ ಕಾಲೇಜಿನಲ್ಲಿ ಮಾಡಿದರು. ಪತ್ರಿಕೋದ್ಯಮದ ವಿದ್ಯಾರ್ಥಿ ಅಲ್ಲದಿದ್ದರೂ ಸಾಹಿತ್ಯ ಮತ್ತು ಬರೆವಣಿಗೆ ಮೇಲಿನ ಆಸಕ್ತಿಯಿಂದಾಗಿ ಮಾಧ್ಯಮ ಜಗತ್ತಿನ ಬಗ್ಗೆ ಕುತೂಹಲವಿತ್ತು. ವಿದ್ಯಾರ್ಥಿ ದೆಸೆಯಿಂದಲೇ ನಾಡಿನ ವಿವಿಧ ಪತ್ರಿಕೆಗಳಲ್ಲಿ ಇವರ ಲೇಖನ, ಕತೆ, ಕವನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಅಧ್ಯಯನದ ವೇಳೆ ಓದು ಮತ್ತು ಬರೆಹದ ಮೇಲಿನ ಪ್ರೀತಿ ಮತ್ತಷ್ಟು ಹೆಚ್ಚಿತು. ಆ ಸಂದರ್ಭದಲ್ಲಿ ಪ್ರಜಾವಾಣಿ ದೀಪಾವಳಿ ವಿಶೇಷಾಂಕಕ್ಕಾಗಿ ನಡೆಸುವ ಕಥಾ ಸ್ಪರ್ಧೆಯಲ್ಲಿ ವಿದ್ಯಾರ್ಥಿ ವಿಭಾಗದ ವಿಶೇಷ ಬಹುಮಾನ ಸಹ ಇವರಿಗೆ ಲಭಿಸಿತ್ತು. ಕನ್ನಡದಲ್ಲಿ ಎಂಎ ಪದವಿ ಮಾಡುತ್ತಿದ್ದ ವೇಳೆ ಇವರು ಯುಜಿಸಿ ನಡೆಸುವ ಎನ್ಇಟಿ ಪರೀಕ್ಷೆಯನ್ನು ಪ್ರಥಮ ಪ್ರಯತ್ನದಲ್ಲೇ ಪಾಸಾಗಿದ್ದರು. ಓದು ಮುಗಿದ ಮೇಲೆ ಒಂದು ವರ್ಷ ಅತಿಥಿ ಉಪನ್ಯಾಸಕರಾಗಿದ್ದರು ಸಹ.

ಆದರೆ ಪತ್ರಿಕೋದ್ಯಮದ ಮೇಲಿನ ಅಪಾರ ಪ್ರೀತಿ ಅವರನ್ನು ಮಾಧ್ಯಮ ಜಗತ್ತಿನ ಕಡೆಗೆ ಸೆಳೆಯಿತು. ಕನ್ನಡ ನಾಡಿನ ಪ್ರತಿಷ್ಠಿತ ಮ್ಯಾಗಝೀನ್ ಗಳಲ್ಲೊಂದಾಗಿರುವ ಸಂಯುಕ್ತ ಕರ್ನಾಟಕ ಬಳಗದ ಕರ್ಮವೀರ ವಾರಪತ್ರಿಕೆಯಲ್ಲಿ ಒಂದು ವರ್ಷ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ಬಳಿಕ ಕನ್ನಡ ಪ್ರಭದಲ್ಲಿ ನಿರಂತರ 14 ವರ್ಷಗಳ ಕಾಲ ವಿವಿಧ ವಿಭಾಗಗಳಲ್ಲಿ ಪಳಗಿದರು. ಮುಖ್ಯ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದ ಅವರು ವಿಶೇಷವಾಗಿ ಕ್ರೀಡಾ ವಿಭಾಗ, ರಾಜ್ಯ ಡೆಸ್ಕ್ ಗಳಲ್ಲಿ ಪರಿಣತಿಯನ್ನು ಪಡೆದರು. ದೆಹಲಿ, ಕೋಲ್ಕತಾ, ಮುಂಬೈ, ರಾಂಚಿ ಮೊದಲಾದೆಡೆ ತೆರಳಿ ಪ್ರೊ ಕಬಡ್ಡಿ ವಿಶೇಷ ವರದಿ, ಸಂದರ್ಶನಗಳನ್ನು ಮಾಡಿದ ಅನುಭವ ಅವರಿಗಿದೆ.

2022ರ ಸೆಪ್ಟೆಂಬರ್ ನಿಂದ ಪ್ರತಿಷ್ಠಿತ ವಿಜಯ ಕರ್ನಾಟಕ ವೆಬ್ ಸೈಟ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅವರು ಡಿಜಿಟಲ್ ವರದಿಗಾರಿಕೆಯ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದಾರೆ. ಕ್ರಿಕೆಟ್, ಕಬಡ್ಡಿ, ಫುಟ್ಬಾಲ್, ಟೆನಿಸ್, ಚೆಸ್, ಅಥ್ಲೆಟಿಕ್ಸ್ ಸೇರಿದಂತೆ ವಿವಿಧ ಕ್ರೀಡೆಗಳ ಆಳ- ವಿಸ್ತಾರಗಳನ್ನು ಬಲ್ಲ ಇವರು ಕ್ರಿಕೆಟ್ ಕುರಿತಾದ ನವಿರಾದ ನಿರೂಪಣೆ ಮತ್ತು ಸಮರ್ಪಕ ವಿಶ್ಲೇಷಣೆ ಮಾಡುವುದರಲ್ಲಿ ಎತ್ತಿದ ಕೈ. ಕ್ರೀಡೆ ಮಾತ್ರವಲ್ಲದೆ ಅಗತ್ಯ ಬಿದ್ದಾಗ ರಾಜ್ಯ ಮತ್ತು ರಾಷ್ಟ್ರ ರಾಜಕೀಯ, ಅಂತಾರಾಷ್ಟ್ರೀಯ ವಿದ್ಯಮಾನಗಳ ಬಗ್ಗೆಯೂ ಬರೆಯಬಲ್ಲರು.… ಇನ್ನಷ್ಟು ಓದಿ