ಮಾರ್ಚ್ ತಿಂಗಳಲ್ಲಿ ಪಾಕಿಸ್ತಾನವು ‘ಒಮೀದ್ ಅಡಿಕ್ಷನ್ ಟ್ರೀಟ್ಮೆಂಟ್ ಆಸ್ಪತ್ರೆ’ ಮೇಲೆ ದಾಳಿ ನಡೆಸಿದ ಪರಿಣಾಮ 269 ನಾಗರಿಕರು ಸಾವನ್ನಪ್ಪಿ, 122 ಮಂದಿ ಗಾಯಗೊಂಡಿದ್ದಾರೆ. ಆಸ್ಪತ್ರೆಯನ್ನು ಯಾವುದೇ ರೀತಿಯಲ್ಲೂ ಸೈನಿಕ ಗುರಿಯೆಂದು ಪರಿಗಣಿಸಲಾಗುವುದಿಲ್ಲ, ಸಂಜೆಯ ತರಾವಿಹ್ ಪ್ರಾರ್ಥನೆಯ ಬಳಿಕ ನಿರಪರಾಧಿಗಳ ಮೇಲೆ ದಾಳಿ ನಡೆಸಿ, ಅಂತರರಾಷ್ಟ್ರೀಯ ಕಾನೂನುಗಳ ಬಗ್ಗೆ ಉಪದೇಶ ನೀಡುವುದು ಪಾಕಂಡತನ ಎಂದು ತೀವ್ರ ವಾಗ್ದಾಳಿ ನಡೆಸಿತು.
ಅಫ್ಘಾನಿಸ್ತಾನದಲ್ಲಿ ಗಡಿ ದಾಳಿಗಳ ಪರಿಣಾಮ 94 ಸಾವಿರಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ ಎಂಬ ವಿಶ್ವಸಂಸ್ಥೆ ಅಂದಾಜನ್ನೂ ಭಾರತ ಮಂಡಿಸಿತು.
ತನ್ನ ದೇಶೀಯ ವೈಫಲ್ಯಗಳನ್ನು ಮರೆಮಾಚಲು ಪಾಕಿಸ್ತಾನ ಹೊರಗಿನ ಸಂಘರ್ಷಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಭಾರತ, ಇದು ಹೊಸ ವಿಚಾರವಲ್ಲ ಎಂದೂ ತಿಳಿಸಿತು.
ಈ ಸಂದರ್ಭದಲ್ಲಿ 1971ರ ‘ಆಪರೇಷನ್ ಸರ್ಚ್ಲೈಟ್’ ಉದಾಹರಣೆ ನೀಡಿದ ಭಾರತ, ಆಗಿನ ಪೂರ್ವ ಪಾಕಿಸ್ತಾನದಲ್ಲಿ, ಇಂದಿನ ಬಾಂಗ್ಲಾದೇಶದಲ್ಲಿ, ಪಾಕಿಸ್ತಾನ ನಡೆಸಿದ ವ್ಯವಸ್ಥಿತ ಹಿಂಸಾಚಾರವನ್ನು ನೆನಪಿಸಿತು. ಆ ಸಮಯದಲ್ಲಿ ಸಾವಿರಾರು ಜನರನ್ನು ಗುರಿಯಾಗಿಸಿಕೊಂಡು ಹತ್ಯೆಯನ್ನು ನಡೆಸಲಾಗಿತ್ತು ಎಂದು ಭಾರತ ತಿಳಿಸಿತು.
ಗಡಿ ದಾಟಿ ನಡೆಯುತ್ತಿರುವ ಭಯೋತ್ಪಾದನೆ ಕುರಿತೂ ಭಾರತ ಮತ್ತೆ ಆತಂಕ ವ್ಯಕ್ತಪಡಿಸಿತು. ಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯ ನೀಡುವ ಅಥವಾ ಬೆಂಬಲಿಸುವ ರಾಷ್ಟ್ರಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಣೆಗಾರರನ್ನಾಗಿ ಮಾಡಬೇಕು ಎಂದು ಭಾರತ ಒತ್ತಾಯಿಸಿತು.
“ಯಾವುದೇ ಕಾರಣವೂ ನಾಗರಿಕರ ಮೇಲೆ ಉದ್ದೇಶಪೂರ್ವಕ ದಾಳಿ ನಡೆಸುವುದನ್ನು ಸಮರ್ಥಿಸಲು ಸಾಧ್ಯವಿಲ್ಲ” ಎಂದು ಹೇಳಿತು.
ಅಂತರರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಸಂಘರ್ಷದ ಸಂದರ್ಭಗಳಲ್ಲಿ ಡ್ರೋನ್ಗಳು, ಕೃತಕ ಬುದ್ಧಿಮತ್ತೆ ಮತ್ತು ಸ್ವಾಯತ್ತ ವ್ಯವಸ್ಥೆಗಳ ಬಳಕೆಯನ್ನು ನಿಯಂತ್ರಿಸುವ ಅಗತ್ಯವನ್ನು ಒತ್ತಿ ಹೇಳಿತು.
ಕೇವಲ ಮಾನವೀಯ ನೆರವು ನೀಡುವುದರಿಂದ ನಾಗರಿಕರ ರಕ್ಷಣೆ ಸಾಧ್ಯವಿಲ್ಲ; ರಾಜಕೀಯ ಉದ್ದೇಶಕ್ಕಾಗಿ ನಡೆಯುವ ಹಿಂಸಾಚಾರ ಮತ್ತು ಭಯೋತ್ಪಾದನೆಯನ್ನು ಸಮಗ್ರವಾಗಿ ಎದುರಿಸಬೇಕೆಂದು ವಿಶ್ವಸಂಸ್ಥೆಯಲ್ಲಿ ಆಗ್ರಹಿಸಿತು.


